ಮುಹಮ್ಮದ್ ಪೈಗಂಬರ್
ಕ್ರಿ.ಶ. ಸು. 569-632. ಪ್ರಪಂಚದ ದೊಡ್ಡ ಧರ್ಮಗಳಲ್ಲಿ ಒಂದಾದ ಇಸ್ಲಾಮ್ ಧರ್ಮದ ಸ್ಥಾಪಕ. ಈತನ ಜನ್ಮದಿನದ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಹಲವರ ಪ್ರಕಾರ ಈತ ಕ್ರಿ. ಶ. 569ನೆಯ ನವೆಂಬರ್ ತಿಂಗಳ 11ರಂದು ಹುಟ್ಟಿದನೆಂದು ಅಭಿಪ್ರಾಯಪಡಲಾಗಿದೆ. ಹುಟ್ಟಿದ್ದು ಅರಬ್‍ದೇಶದ ಮಕ್ಕಾ ನಗರದ ಖುರೈಷ್ ಎಂಬ ಗೌರವಾನ್ವಿತ ವಂಶದಲ್ಲಿ. ತಂದೆ ಅಬ್ದುಲ್ಲಾಹ್; ತಾಯಿ ಅಮೀನಾ. ಹುಟ್ಟುವುದಕ್ಕೆ ಮುನ್ನವೇ ಈತ ತಂದೆಯನ್ನು ಕಳೆದುಕೊಂಡಿದ್ದ. ವ್ಯಾಪಾರಕ್ಕೋಸ್ಕರ ಪ್ರಯಾಣ ಮಾಡುತ್ತಿದ್ದು ಹಿಂತಿರುಗುವಾಗ ದಾರಿಯಲ್ಲೇ ಮೃತನಾದ ಮುಹಮ್ಮದ್‍ನ ತಂದೆಯ ದರ್ಶನ ಅಮೀನಾಳಿಗೂ ಆಗಲಿಲ್ಲ, ಹೀಗೆ ನಿರ್ಭಾಗ್ಯನಾದ ಮುಹಮ್ಮದನನ್ನು ಮೊದಲು ಸುವೈಬಾ ಎಂಬ ಗುಲಾಮಿ ಹೆಂಗಸು ಸಾಕಿ ಅನಂತರ ಹಳಿಮ ಎಂಬ ದಾದಿಯ ಕೈಗೆ ಒಪ್ಪಿಸಿದಳು. ಇವಳ ಆರೈಕೆಯಲ್ಲಿ ಬೆಳೆಯುತ್ತಿದ್ದ. ಅನಂತರ ಈತ ತನ್ನ ತಾಯಿಯ ಬಳಿಗೆ ಬಂದ. ತನ್ನ 6ನೆಯ ವಯಸ್ಸಿನಲ್ಲಿ ತಾಯಿಯನ್ನೂ ಕಳೆದುಕೊಂಡ. ತಬ್ಬಲಿ ಮುಹಮ್ಮದನನ್ನು ಅಜ್ಜ ಅಬ್ದುಲ್ ಮುತ್ತಲಿಬ್ ಸಾಕಿದ. ಹುಡುಗನಿಗೆ ಎಂಟು ವರ್ಷ ವಯಸ್ಸು ತುಂಬುವ ವೇಳೆಗೆ ಅಜ್ಜನೂ ತೀರಿಕೊಂಡ. ಮುಂದೆ ಇವನು ಚಿಕ್ಕಪ್ಪ ಅಬೂತಾಲಿಬ್‍ನ ಬಳಿ ಬೆಳೆದ.

	ಅಬೂತಾಲಿಬ್‍ನಿಗೆ ಮುಹಮ್ಮದನನ್ನು ಕಂಡರೆ ಬಲು ಪ್ರೀತಿ. ಆದರೆ ಅವನದು ಬಡಸಂಸಾರ, ಯಾರೂ ಕುಳಿತು ಊಟಮಾಡುವ ಹಾಗಿರಲಿಲ್ಲ. ಹೀಗಾಗಿ ಮುಹಮ್ಮದ್ ತನ್ನ ಚಿಕ್ಕಪ್ಪನಿಗೆ ಕುರಿಕಾಯುವುದರಲ್ಲೂ ವ್ಯಾಪಾರದಲ್ಲೂ ನೆರವಾಗ ತೊಡಗಿದ. ಈತ 12 ವರ್ಷದ ಹುಡುಗನಾಗಿದ್ದಾಗಲೇ ಚಿಕ್ಕಪ್ಪನ ಜೊತೆ ಸಿರಿಯಾದೇಶಕ್ಕೆ ಹೋಗಿ ಅಲ್ಲಿ ಮೊದಲ ಸಲ ಹೊರಗಿನ ಪ್ರಪಂಚದ, ಮುಖ್ಯವಾಗಿ ಕ್ರೈಸ್ತ ಸಂನ್ಯಾಸಿಗಳ ಪರಿಚಯ ಪಡೆದ. 25ನೆಯ ವಯಸ್ಸಿನ ಹೊತ್ತಿಗೆ ಮುಹಮ್ಮದನ ಹೆಸರು ವರ್ತಕರಲ್ಲೆಲ್ಲ ಹರಡಿತ್ತು. ಖುರೈಷ್ ವಂಶದ ಖದೀಜಾ ಎಂಬ ಧನಿಕ ವಿಧವೆಯೊಬ್ಬಳು ಮುಹಮ್ಮದನನ್ನು, ಆತನ ಚಿಕ್ಕಪ್ಪನ ಮಾತಿನ ಮೇಲೆ, ಸಿರಿಯಾ ದೇಶದಲ್ಲಿ ತನ್ನ ವ್ಯಾಪಾರ ಪ್ರತಿನಿಧಿಯಾಗಿ ನೇಮಿಸಿಕೊಂಡಳು. ಮುಹಮ್ಮದನ ಸರಳತೆ, ಪ್ರಾಮಾಣಿಕತೆ, ಕಾರ್ಯದಕ್ಷತೆ ಕಂಡು ಮತ್ತು ಆತನ ಚೆಲುವಿಗೆ ಮನಸೋತು ತನ್ನನ್ನು ಮದುವೆಯಾಗೆಂದು ಕೇಳಿದಳು. ಆಗ ಅವಳಿಗೆ ನಲವತ್ತು ವರ್ಷಗಳು ಕಳೆದು ಎರಡು ಸಲ ವಿಧವೆಯಾಗಿ, ಹಿಂದಿನ ಗಂಡಂದಿರಿಂದ ಪಡೆದ ಮಕ್ಕಳೂ ಇದ್ದರು. 25 ವರ್ಷಗಳು ಯುವಕ ಮುಹಮ್ಮದ್ ಚಿಕ್ಕಪ್ಪನ ಒಪ್ಪಗೆ ಪಡೆದು ಮದುವೆಯಾದ. ಆಕೆ ತನ್ನ 65ನೆಯ ವಯಸ್ಸಿನಲ್ಲಿ ಸತ್ತಳು. ಇವರಿಗೆ ಹಲವು ಗಂಡುಮಕ್ಕಳೂ ಹೆಣ್ಣುಮಕ್ಕಳೂ ಆದವು. ಕಿರಿಯ ಮಗಳಾದ ಫಾತಿಮಾ ಇವರ ನೆಚ್ಚಿನ ಮಗಳು. ಆಕೆ ಅಬೂತಾಲಿಬ್‍ನ ಮಗ ಆಲಿಯನ್ನು ಮದುವೆಯಾಗಿ ಹಸನ್ ಮತ್ತು ಹುಸೇನ್ ಎಂಬ ಮಕ್ಕಳನ್ನು ಪಡೆದಳು. ಈ ಮಕ್ಕಳ ಸಂತತಿಯನ್ನೇ ಈಗ ಸೈಯದ್ದರೆಂದು ಕರೆಯುವುದು. ಖದೀಜಾ ತೀರಿಕೊಂಡ ಮೇಲೆ ಮುಹಮ್ಮದ್ ಇನ್ನೂ ಹಲವು ಮದುವೆಯಾದ. ಇವರಲ್ಲಿ ಆಯೇಷ ಪ್ರಸಿದ್ಧಳು. ಇವರಲ್ಲಿ ಯಾರಿಗೂ ಮಕ್ಕಳಾಗಲಿಲ್ಲ. ಆದರೆ ಇವರೆಲ್ಲರೂ ಮುಹಮ್ಮದನ ಧರ್ಮವನ್ನು ಹರಡುವುದರಲ್ಲಿ ಸಹಾಯಕರಾದರು.

	ಆಗಿನ ಕಾಲದಲ್ಲಿ ಅರಬ್ ದೇಶ ಅಜ್ಞಾನ ಅವಿದ್ಯೆಗಳ ಅಂಧಕಾರದಲ್ಲಿ ಮುಳುಗಿಹೋಗಿತ್ತು. ಜನರಲ್ಲಿ ಪರಸ್ಪರ ವೈಷಮ್ಯಗಳು ಹೆಚ್ಚಾಗಿ ಗುಂಪುಕಟ್ಟಿಕೊಂಡು ಕೊಲೆ ದರೋಡೆಗಳನ್ನು ಮಾಡುತ್ತಿದ್ದರು. ಮುಹಮ್ಮದ್‍ನ ಹುಟ್ಟೂರಾದ ಮಕ್ಕಾದಲ್ಲಿಯೂ ಇದು ಸರ್ವೇಸಾಮಾನ್ಯವಾಗಿತ್ತು. ಮಕ್ಕಾದಲ್ಲಿ ಅನೇಕ ಪಂಗಡಗಳಿದ್ದವು. ಇವುಗಳ ಸಮುದಾಯನಾಮ ಖುರೈಷ್. ಇವುಗಳಲ್ಲಿ ಬನೀಮಖ್ ಸೂಮ್, ಬನೀ ಉಮಯ್ಯ, ಬನೀ ಹಾಷಿಮ್ ಎಂಬ ಮೂರು ಪ್ರಬಲ ಪಂಗಡಗಳಿದ್ದವು. ಎರಡು ಪಂಗಡಗಳು ಮುಹಮ್ಮದನ ಪಂಗಡವಾದ ಮೂರನೆಯದರ ಮೇಲೆ ಸದಾ ಕೈಮಾಡುತ್ತಿದ್ದುವು. ಆಗ ಮಕ್ಕಾದಲ್ಲಿ ಅಧಿಕಾರ ಪಡೆದ ನಾಯಕರು ಯಾರೂ ಇರಲಿಲ್ಲ. ಅಬೂಲಾಲಿಬ್ ಇತರ ಪಂಗಡಗಳ ಮುಂದಾಳುಗಳನ್ನು ಎದುರಿಸಿ ಅಧಿಕಾರ ವಹಿಸಿಕೊಳ್ಳುವಷ್ಟು ಹಣವಂತನಾಗಿರಲಿಲ್ಲ. ಮಕ್ಕಾದ ಕಾಬಾ ಮಂದಿರ ದೊಡ್ಡ ಯಾತ್ರಾಕ್ಷೇತ್ರವಾಗಿತ್ತು. ಅಲ್ಲದೆ ದೊಡ್ಡ ವ್ಯಾಪಾರ ಕೇಂದ್ರವೂ ಆಗಿತ್ತು. ಅರಬ್ ದೇಶದ ಮೂಲೆಮೂಲೆಗಳಿಂದ ಯಾತ್ರಿಕರೂ ವ್ಯಾಪಾರಿಗಳು ಅಲ್ಲಿಗೆ ಬರುತ್ತಿದ್ದರು. ಹೀಗೆ ಹಲವು ತರಹದ ಜನರು ಅಲ್ಲಿ ಬಂದು ಸೇರುತ್ತಿದ್ದುದರಿಂದ ಉತ್ಸವ ಹಾಗೂ ವ್ಯಾಪಾರದ ಜೊತೆಗೆ ಜೂಜು, ಕುಡಿತ, ಸೂಳೆಗಾರಿಕೆ ಮೊದಲಾದ ದುರಾಚಾರಗಳೂ ಪ್ರಾರಂಭವಾದವು. ಜನರ ಪ್ರಾಣ, ಮಾನ, ಆಸ್ತಿಗಳಿಗೆ ಯಾವ ಸುರಕ್ಷತೆಯೂ ಇರಲಿಲ್ಲ. ಹೊರದೇಶದಿಂದ ಬಂದವರನ್ನು ಸುಲಿಗೆ ಮಾಡುತ್ತಿದ್ದರು. ಮುಹಮ್ಮದನ ಕಾಲದಲ್ಲಿ ಅರಬ್ ದೇಶದ ಜನ ದೇವರು ಒಬ್ಬನೇ ಎಂದು ತಿಳಿದಿರಲಿಲ್ಲ ವಿಗ್ರಹಾರಾಧನೆ ಬಳಕೆಯಲ್ಲಿತ್ತು. ಕಾಬಾ ಮಂದಿರದಲ್ಲಿ 360 ವಿಗ್ರಹಗಳಿದ್ದು ದಿನಕ್ಕೆ ಒಂದೊಂದು ವಿಗ್ರಹದಂತೆ ಪೂಜೆ ನಡೆಯುತ್ತಿತ್ತು. ನಿತ್ಯ ಜೀವನದಲ್ಲಿ ಕಾಣುತ್ತಿದ್ದ ಇಂಥ ದುರ್ಘಟನೆಗಳು ಮುಹಮ್ಮದನ ಮೇಲೆ ಪರಿಣಾಮ ಉಂಟುಮಾಡಿ ಇವನ ಮನಸ್ಸನ್ನೇ ಬದಲಾಯಿಸಿದುವು. ಈತ ಜನರ ಮಧ್ಯೆ ಸೇರಬಯಸದೆ ಏಕಾಂಗಿಯಾಗಿರುತ್ತಿದ್ದ. ಮುಹಮ್ಮದನಿಗೆ ಸಾಕಷ್ಟು ವಿದ್ಯಾಭ್ಯಾಸ ಇರದಿದ್ದರೂ ತನ್ನ ನಾಡಿನ ಉನ್ನತಿಗೆ ಶ್ರಮಿಸಿದ. ಹಿರಿಯರ ಪುಣ್ಯಪುರುಷರ ಜೀವನ ತಿಳಿದಿತ್ತು. ತನ್ನ ದೇಶದ ಜನರಲ್ಲಿ ಅಪಾರ ಶ್ರದ್ಧೆ ಹಾಗೂ ಪ್ರೀತಿ ಇತ್ತು. ಹೀಗೆ ನಾಡಿನ ಜನರ ಅವನತಿಯ ದಾರಿಯನ್ನು ತಪ್ಪಿಸಲು ಯೋಚನಾಮಗ್ನನಾದ. ಅವರ ಹಿತಚಿಂತನೆಯನ್ನು ನೋಡಿಕೊಳ್ಳುವುದಕ್ಕಾಗಿ, ಹೊರಗಿನಿಂದ ಬಂದವರ ಯೋಗಕ್ಷೇಮ ವಿಚಾರಿಸಿಕೊಳ್ಳುವುದಕ್ಕಾಗಿ ಮತ್ತು ಜನರನ್ನು ಉದ್ಧರಿಸುವ ಸಲುವಾಗಿ ಮುಹಮ್ಮದ್ ಹಲವಾರು ವಿದ್ಯಾವಂತರನ್ನೂ ಬುದ್ಧಿಶಾಲಿಗಳನ್ನೂ ಸೇರಿಸಿ ಒಂದು ಬಳಗ ಕಟ್ಟಿದ. ಅವರ ಕಾರ್ಯಸಾಧನೆ, ಸೇವಾಬುದ್ಧಿ, ಸರಳತೆ ನೋಡಿ ಜನರು ಇವನನ್ನು 'ಅಲ್ ಅಮೀನ್ (ಪ್ರಜಾಪಾಲಕ) ಎಂದು ಕರೆದರು.

	ಹೀಗೆ ಜೀವನ ಸಾಗುತ್ತಿದ್ದರೂ ಸುಮಾರು 40 ವರ್ಷ ವಯಸ್ಸಿನ ತನಕ ಮುಹಮ್ಮದನ ಜೀವನದಲ್ಲಿ ವಿಶೇಷವೇನೂ ನಡೆಯಲಿಲ್ಲ. ತನ್ನ ವ್ಯಾಪಾರ, ಏಕಾಂತದಲ್ಲಿಯೇ ಬದುಕು ಸಾಗಿತ್ತು. ಆಗಾಗ್ಗೆ 'ಹಿರಾ ಗುಡ್ಡಕ್ಕೆ ಹೋಗಿ ಪ್ರಾರ್ಥನೆ ಹಾಗೂ ಧ್ಯಾನಗಳಲ್ಲಿ ಮಗ್ನನಾಗಿರುತ್ತಿದ್ದ. ಕ್ರಮೇಣ ಅಲ್ಲಿ ಮುಹಮ್ಮದನಿಗೆ ದೈವದರ್ಶನವಾಯಿತು. ಅನಿರೀಕ್ಷಿತವಾಗಿ 'ದೇವರ ಸಂದೇಶವನ್ನು ಸಾರು ಎಂಬ ಅಶರೀರವಾಣಿ ಕೇಳಿಸಿತು. ಒಡನೆಯೇ ಮನೆಗೆ ಬಂದು ನಡೆದುದನ್ನೆಲ್ಲ ತನ್ನ ಹೆಂಡತಿ ಖದೀಜಾಗೆ ಹೇಳಿದ. ಆಗ ಖದೀಜಾ ಮೊತ್ತಮೊದಲಿಗೆ ಇವನ ಶಿಷ್ಯಳಾದಳು. ಅನಂತರ ಆಲಿ, ಅಬೂಬಕರ್ ಸಿದ್ಧೀಖ್, ಜೈದ್‍ಬಿನ್ ಹಾರಿಸಾ ಈಮಾನ್ ತಂದರು ಇವನ ಅನುಯಾಯಿಗಳಾದರು. ಅಲ್ಲಿಂದ ಮುಹಮ್ಮದನ ಧರ್ಮಪ್ರಚಾರ ಕಾರ್ಯ ಆರಂಭವಾಯಿತು. ಇದರ ಒಂದು ಭಾಗ ಮೊದಲ ಹದಿಮೂರು ವರ್ಷ ಪರ್ಯಂತ ಮಕ್ಕಾದಲ್ಲಿ ನಡೆಯಿತು. ಅನಂತರದ ಎರಡನೆಯ ಭಾಗ ಮದೀನಾ ನಗರದಲ್ಲಿ ಹತ್ತು ವರ್ಷ ಕಾಲ ನಡೆಯಿತು.

	ಮೊದಲ ಮೂರು ವರ್ಷ ಮುಹಮ್ಮದ್ ತನ್ನ ಸಂಬಂಧಿಕರು, ಪರಿವಾರದವರು ಹಾಗೂ ಮಿತ್ರರಿಗೆ ಇಸ್ಲಾಮ್ ಧರ್ಮದ ಬಗ್ಗೆ ಶಿಕ್ಷಣ ಕೊಟ್ಟ. ತರುವಾಯ ತನ್ನ ಸಂದೇಶವನ್ನು ಮನೆಮನೆಗೂ ಒಯ್ದು ಮುಟ್ಟಿಸುವ ಕಾರ್ಯದಲ್ಲಿ ತೊಡಗಿದ. ಸಫಾ ಎಂಬ ಬೆಟ್ಟದ ಮೇಲಿಂದ ಮಹತ್ತ್ವಪೂರ್ಣವಾದ ಒಂದು ಭಾಷಣ ಮಾಡಿದ. ಅವನ ಉಪದೇಶಾವೃತ ಕೇಳಿ ಜನ ನಕ್ಕರು. ಅಪಹಾಸ್ಯ ಮಾಡಿದರು. ಇದಾವುದಕ್ಕೂ ಹೆದರದೆ ಮುಹಮ್ಮದ್ ಇಸ್ಲಾಮ್‍ಧರ್ಮ ಹರಡುವುದರಲ್ಲಿಯೂ ಅಲ್ಲಾನ (ದೇವರ) ಸಂದೇಶ ಸಾರುವುದರಲ್ಲಿಯೂ ನಿರತನಾದ.

	ಈ ಕಾಲದಲ್ಲಿಯೇ ಮುಸಲ್ಮಾನರ ಪವಿತ್ರ ಗ್ರಂಥ ಕುರಾನ್ ರಚನೆಗೊಂಡಿತು. ಕುರಾನ್ ಇಸ್ಲಾಮ್ ಧರ್ಮದ ಮೂಲಾಧಾರ ಗ್ರಂಥ. ಅದು ಪರಮಾತ್ಮನ ಅಮರವಾಣಿ. ಸ್ವರ್ಗದಲ್ಲಿ ಇರಿಸಿದ್ದ ಈ ಗ್ರಂಥ ಪ್ರಮುಖ ದೇವದೂತ ಗ್ಯಾಬ್ರಿಯಲನ ಮೂಲಕ ಪರಮಾತ್ಮನಿಂದ ದೊರಕಿತೆಂದು ಮುಸಲ್ಮಾನರು ತಿಳಿಯುತ್ತಾರೆ. ಇದರಲ್ಲಿ 30 ಭಾಗಗಳೂ 144 ಸೂರಾಗಳೂ (ಅಧ್ಯಾಯ) ಇವೆ. ಅಧ್ಯಾಯಗಳನ್ನು ಮಕ್ಕಾ ಅಧ್ಯಾಯಗಳು ಹಾಗೂ ಮದೀನಾ ಅಧ್ಯಾಯಗಳೆಂದು ವಿಂಗಡಿಸಿದೆ. ಮಕ್ಕಾ ನಗರದ ಧರ್ಮಪ್ರಚಾರ ಕಾಲದಲ್ಲಿ ಕುರಾನಿನ ಬಲುದೊಡ್ಡ ಭಾಗ ಹುಟ್ಟಿತ್ತು. ಹೀಗೆ ಹುಟ್ಟಿದ ಕುರಾನಿನ ಭಾಗಗಳು ಜನರಲ್ಲಿ ತುಂಬ ಪ್ರಭಾವ ಬೀರಿದವು. ವಿಶೇಷವಾಗಿ 'ಹಜ್ (ಮಕ್ಕಾ) ಯಾತ್ರೆ ಸಮಯದಲ್ಲಿ ಬೇರೆ ಬೇರೆ ಕಡೆಯಿಂದ ಬಂದ ಜನರ ಮೇಲೆ ಇದು ಹೆಚ್ಚಿನ ಪ್ರಭಾವ ಬೀರಿತು. ಕ್ರಮೇಣ ಮುಹಮ್ಮದನ ಶತ್ರು ಪಕ್ಷದವರಲ್ಲಿ ಮುಖ್ಯವಾದ ಉವರ್ ಕುರಾನಿನ ಪ್ರಭಾವಕ್ಕೆ ಒಳಗಾಗಿ ಇಸ್ಲಾಮ್ ಧರ್ಮದ ಅನುಯಾಯಿಯಾದ. ಆದರೂ ಖುರೈಷ್ ಪಂಗಡದವರಿಗೆ ಇದು ದೊಡ್ಡ ಸಮಸ್ಯೆಯಾಗಿತ್ತು. ಹೀಗಾಗಿ ಮುಹಮ್ಮದನ ಇಡೀ ವಂಶಕ್ಕೆ ವಿರೋಧಿಗಳು ಹೆಚ್ಚಾದರು. ಇಂಥ ಪರಿಸ್ಥಿತಿಯಲ್ಲಿ ಅವನ ಅನುಯಾಯಿಗಳು ಬಹಳ ಕಷ್ಟ ಪಡಬೇಕಾಯಿತು. ತನ್ನ ಶಿಷ್ಯರ ಸಂಕಟಗಳಿಗಾಗಿ ನೊಂದುಕೊಂಡು ಅವರಲ್ಲಿ ಹಲವರನ್ನು ನೆರೆ ರಾಜ್ಯವಾದ ಅಬಿಸೀನಿಯಾಕ್ಕೆ ಕಳುಹಿಸಿ ಅಲ್ಲಿ ಅವರು ಸುರಕ್ಷಿತವಾಗಿ ನೆಲಸುವಂತೆ ಮಾಡಿದ. ಉಮರ್ ಇಸ್ಲಾಮ್ ಧರ್ಮ ಸ್ವೀಕರಿಸಿದ ಅನಂತರ ಮುಸಲ್ಮಾನರಿಗೆ 'ಕಾಬಾದಲ್ಲಿ ನಮಾಜು (ಪ್ರಾರ್ಥನೆ) ಮಾಡಲು ಅವಕಾಶ ಸಿಕ್ಕಿತು.

	ಇದೇ ಸಮಯದಲ್ಲಿ (ಸು. 620) ಮುಹಮ್ಮದನ ಚಿಕ್ಕಪ್ಪ ತೀರಿಕೊಂಡದ್ದು ಹಾಗೂ ಈ ದುಃಖ ಮರೆಯಾಗುವ ಮೊದಲೇ ಅವನ ಪತ್ನಿ ಖದೀಜಾ ತೀರಿಕೊಂಡಿದ್ದು ಮುಹಮ್ಮದನ ಜೀವನದಲ್ಲಿ ಸಹಿಸಲಾರದ ಘಟನೆಗಳಾದವು. ಜೊತೆಗೆ ಮಕ್ಕಾ ಜನರ ಹಿಂಸೆ. ಹೀಗಾಗಿ ಮಕ್ಕಾನಗರ ಬಿಟ್ಟು 'ತಾಇಫ್ ನಗರಕ್ಕೆ ಹೋಗಿ ಅಲ್ಲಿಯ ಕೆಲವು ಪ್ರಮುಖ ವ್ಯಕ್ತಿಗಳ ಮುಂದೆ ಅಲ್ಲಾನ ಸಂದೇಶವನ್ನಿಟ್ಟ. ಆದರೆ ಅವನಿಗೆ ಅಲ್ಲಿ ಸಿಕ್ಕಿದ್ದು ಅಪಹಾಸ್ಯ ಮತ್ತು ಕಿರುಕುಳ. ರಕ್ತಸೋರುವ ಹಾಗೆ ಮುಹಮ್ಮದನಿಗೆ ಕಲ್ಲುಗಳಿಂದ ಹೊಡೆದರು. ಇಂಥ ಪರಿಸ್ಥಿತಿಯಲ್ಲೂ 'ದೇವನೇ ಈ ನನ್ನ ಜನಾಂಗದವರಿಗೆ ನೇರವಾದ ದಾರಿ ತೋರು. ಇವರು ಅಲ್ಪಜ್ಞರು. ವಿಷಯವೇನೆಂದು ತಿಳಿಯಲು ಇವರಿಂದಾಗಿಲ್ಲ ಎಂದು ಪ್ರಾರ್ಥನೆ ಮಾಡಿದ.

	ಮುಹಮ್ಮದನಿಗೆ ಹಜ್ó ಸಮಯಲ್ಲಿ ಬಹಳ ಜನರನ್ನು ಭೇಟಿ ಮಾಡುವ ಅವಕಾಶ ದೊರಕುತ್ತಿತ್ತು. ಅವನು ಒಂದು ಸಾರಿ 'ಅಖ್‍ಬಾ ಎಂಬ ಸ್ಥಳದ ಹತ್ತಿರ ಮದೀನದ (ಬಯಸ್ರಬ್‍ನಗರ) ಕೆಲವು ವ್ಯಕ್ತಿಗಳ ಮುಂದೆ ಇಸ್ಲಾಮಿನ ಸಂದೇಶವನ್ನಿಟ್ಟ. ಅವರಲ್ಲಿ ಆರು ಜನರು ಮುಸಲ್ಮಾನರಾದರು. ಪುನಃ ಹನ್ನೆರಡು ಜನ ಮುಹಮ್ಮದನಲ್ಲಿಗೆ ಬಂದು ಅವನ ಸಂದೇಶ ಕೇಳಿ ಇಸ್ಲಾಮ್ ಧರ್ಮ ಸ್ವೀಕರಿಸಿದರು. ಇವರು ಮದೀನಕ್ಕೆ ಹೋಗುವಾಗ ಕುರಾನನ್ನು ಓದಿಹೇಳಲು ಒಬ್ಬ ವ್ಯಕ್ತಿಯನ್ನು ಕರೆದುಕೊಂದು ಹೋದರು. ಹೀಗಾಗಿ ಮದೀನಾದಲ್ಲಿ ಇಸ್ಲಾಮ್ ಶೀಘ್ರವಾಗಿ ಹರಡಿತು. ಇದರ ಫಲವಾಗಿ ತನ್ನ ಧರ್ಮಪ್ರಸಾರದ ಹನ್ನೆರಡನೆಯ ವರ್ಷ ಅಖ್‍ಬಾದಲ್ಲಿ 72 ಜನರು ಮಹಮ್ಮದನನ್ನು ಭೇಟಿಮಾಡಿ ಇಸ್ಲಾಮ್ ಧರ್ಮ ಸ್ವೀಕರಿಸಿದರು. ಹೀಗೆ ಮುಹಮ್ಮದ್ ಮದೀನಾದಿಂದ ಯಾತ್ರೆಗೆ ಬರುತ್ತಿದ್ದ ಬಹುಮಂದಿಯನ್ನು ತನ್ನ ಮತ ಒಪ್ಪಿಕೊಳ್ಳುವಂತೆ ಮಾಡುವುದರಲ್ಲಿ ಯಶಸ್ವಿಯಾದ. ಮದೀನಾದ ಜನ ಮುಹಮ್ಮದನನ್ನು ತಮ್ಮ ಊರಿಗೆ ಕರೆದುಕೊಂಡು ಹೋಗಬೇಕೆಂದು ಬಯಸಿದರು. ಇದನ್ನು ತಿಳಿದ ಮುಹಮ್ಮದನ ವಿರೋಧಿಗಳು ಇವನನ್ನು ಕೊಲ್ಲುವುದಕ್ಕೆ ನಿರ್ಧರಿಸಿದರು. ಇದನ್ನರಿತ ಮುಹಮ್ಮದನ ತನ್ನ ಉಡುಪನ್ನು ಅಲಿಗೆ ತೊಡಿಸಿ ವೇಷ ಬದಲಾಯಿಸಿಕೊಂಡು ಅದೇ ರಾತ್ರಿ ಮದೀನಾಕ್ಕೆ ಹೊರಟ. ಕೆಲವರ ಪ್ರಕಾರ 622 ಜೂನ್ ತಿಂಗಳ 20ರಂದು ಮುಹಮ್ಮದ್ ಮದೀನಾ ನಗರ ತಲುಪಿದ. ಇನ್ನೂ ಕೆಲವರು ಇವನು 622 ಜುಲೈ 16ರಂದು ಮದೀನಾ ನಗರ ತಲುಪಿದ ಎಂದು ಅಭಿಪ್ರಾಯ ಪಡುತ್ತಾರೆ. ಹೀಗೆ ಸ್ವದೇಶ ಬಿಟ್ಟು ಧರ್ಮ ಪ್ರಸಾರ ಕಾರ್ಯಕ್ಕೆ ಅನುಕೂಲವಾದ ಸ್ಥಳಕ್ಕೆ ಹೋಗುವುದನ್ನು ಇಸ್ಲಾಮಿನ ಪರಿಭಾಷೆಯಲ್ಲಿ 'ಹಿಜ್ರತ್ ಎನ್ನುತ್ತಾರೆ. ಇದು ಚರಿತ್ರೆಯಲ್ಲಿ ಪ್ರಸಿದ್ಧ ದಿನ. ಇಸ್ಲಾಮಿನಲ್ಲಿ ಪವಿತ್ತ ದಿನ. ಆ ವರ್ಷದಿಂದಲೇ ಮುಸಲ್ಮಾವರ 'ಹಿಜರಿ' ಆರಂಭವಾದದ್ದು.

	ಮದೀನಾ ತಲುಪಿದ ಮುಹಮ್ಮದನಿಗೆ ಖುಬಾ ಎಂಬ ಸ್ಥಳದಲ್ಲಿ ಮದೀನಾ ಜನರ ಮೊತ್ತಮೊದಲ ಸ್ವಾಗತ ದೊರೆಯಿತು. ಅಲ್ಲಿ ಇತರ ಮುಸಲ್ಮಾನರೊಂದಿಗೆ ಮುಹಮ್ಮದ್ ಮಸೀದಿಯೊಂದನ್ನು ಕಟ್ಟಿದ. ಅನಂತರ ಪ್ರತಿಯೊಬ್ಬರೂ ಮುಹಮ್ಮದನನ್ನು ತಮ್ಮ ತಮ್ಮ ಮನೆಯಲ್ಲಿರುವಂತೆ ಕರೆದರು. ಇವನಿಗೆ ಯಾರ ಮನೆಗೆ ಹೋಗಬೇಕೆಂಬುದು ಕಷ್ಟವಾಯಿತು. ಕೊನೆಗೆ ತನ್ನ ಒಂಟೆ ಯಾರ ಮನೆಯ ಮುಂದೆ ಹೋಗಿ ನಿಲ್ಲುತ್ತದೆಯೋ ಅವರ ಮನೆಯಲ್ಲಿ ನಾನೀರುತ್ತೇನೆ ಎಂದು ಹೇಳಿದ. ಒಂಟೆ ಕೊನೆಗೆ ಅಯ್ಯಬ್ ಅನ್‍ಸಾರಿ ಎಂಬವನ ಮನೆಯ ಮುಂದೆ ನಿಂತಿತು. ಈ ಸ್ಥಳದಲ್ಲಿ ಈಗ ಮಸ್ಜಿದ್-ನಬವೀ ಇದೆ. ಅನಂತರ ಮಕ್ಕಾದಿಂದ ಬಂದ ಒಬ್ಬೊಬ್ಬ ಮುಸಲ್ಮಾನನನ್ನು ಮದೀನಾ ನಗರದ ಒಬ್ಬೊಬ್ಬ ವ್ಯಕ್ತಿಯ ಮನೆಗೆ ಕಳುಹಿಸಿ ಅವನು ಅಲ್ಲಿ ನೆಲಸುವಂತೆ ಮಾಡಿ ಸಮಸ್ಯೆಯನ್ನು ಬಿಡಿಸಿದ. ಮದೀನಾದವರಿಗೆ ಅನ್‍ಸಾರ್ (ಸಹಾಯ ಮಾಡಿದವರು) ಎಂದೂ ಮಕ್ಕಾಜನರಿಗೆ ಮಹಾಜರ್ (ಅಲ್ಲಾನಿಗಾಗಿ ಮನೆ, ಆಸ್ತಿ ಬಿಟ್ಟು ಬಂದವರು) ಎಂದೂ ಕರೆದ.

	ಎರಡನೆಯ ಹಿಜರಿ ಶಾಬಾನ್ ತಿಂಗಳಲ್ಲಿ ಒಂದು ಘಟನೆ ನಡೆಯಿತು. ನಮಾಜು ಮಾಡುವಾಗ ಮುಸಲ್ಮಾನರು ಬೈತುಲ್ ಮೊಖದ್ದಸ್‍ನ ಬದಲು (ಯಹೂದ್ಯರು ಮುಖಮಾಡಿ ಪ್ರಾರ್ಥನೆ ಮಾಡುವ ದಿಕ್ಕು) ಕಾಬಾದ ಕಡೆ ಮುಖಮಾಡಿ ನಮಾಜು ಮಾಡಲು ಪ್ರಾರಂಭ ಮಾಡಿದರು.

	ಮದೀನಾದಲ್ಲಿ ಮುಹಮ್ಮದನ ಪ್ರಾಬಲ್ಯ ಕಂಡು ಬಹಳ ಜನ ಶತ್ರುಗಳಾದರು. ಮಕ್ಕಾನಗರದ ಖುರೈಷಿಗಳು ಇದನ್ನು ಸಹಿಸದೆ ಮದೀನಾದಲ್ಲೂ ಮಹಮ್ಮದನಿಗೆ ತೊಂದರೆ ಕೊಡಲಾರಂಭಿಸಿದರು. ಈ ಖುರೈಷಿಗಳೊಡನೆ ವ್ಯಾಪಾರ ವ್ಯವಹಾರ ನಡೆಸುತ್ತಿದ್ದ ಮದೀನಾದ ಯಹೂದ್ಯರು ಅವನ ಶತ್ರುಗಳಾದರು. ಮುಹಮ್ಮದನ ಕಡೆಯವರಿಗೆ ಸೈನಿಕ ಶಿಕ್ಷಣ ಸಿಗುವ ಮೊದಲೇ ಮಕ್ಕಾ ನಗರದಿಂದ ಶತ್ರುಗಳು ಮುತ್ತಿಗೆ ಹಾಕಿದರು. ಬದರ್ ಎಂಬಲ್ಲಿ ನಡೆದ ಯುದ್ಧದಲ್ಲಿ ಮುಹಮ್ಮದ್ ಗೆದ್ದ. ತನಗೆ ಸಿಕ್ಕಿದ ದ್ರವ್ಯವನ್ನು ಬಡವರಿಗೆ ಹಂಚಿದ. ಶತ್ರುಗಳು (ಖುರೈಷಿಗಳು) ತಮಗುಂಟಾದ ಸೋಲಿನಿಂದ ರೋಷಯುಕ್ತರಾಗಿ ಮತ್ತೆ ಯುದ್ಧಕ್ಕೆ ಬಂದರು. 625ರಲ್ಲಿ ಉಹುದ್ ಎಂಬ ಗುಡ್ಡದ ಬಳಿ ನಡೆದ ಯುದ್ಧದಲ್ಲಿ ಮುಸಲ್ಮಾನರು ಗೆದ್ದರು.

	ಮುಸಲ್ಮಾನರಿಗೂ ಯಹೂದ್ಯರಿಗೂ ಕಲಹ ಮುಂದುವರಿಯಿತು. ಯಹೂದ್ಯರು ಮುಹಮ್ಮದನ ಅನುಯಾಯಿಗಳಿಗೆ ತೊಂದರೆ ಕೊಡಲಾರಂಭಿಸಿದರು. ಇದರಿಂದಾಗಿ ಕೆಲವು ಯಹೂದ್ಯರನ್ನು ಮುಹಮ್ಮದ್ ಮದೀನಾನಗರದಿಂದ ಹೊರಕ್ಕೆ ಅಟ್ಟಿಸಿದ. ಕೆಲವು ದಿನಗಳಲ್ಲಿ ಇಡೀ ಅರಬ್‍ದೇಶದ ಜನರು ಮುಹಮ್ಮದನ ವಿರೋಧಿಗಳಾದರು. ಅಲ್ಲಲ್ಲಿ ದಂಗೆ ಗಲಾಟೆಗಳು ನಡೆದವು. ಇದು ಯಹೂದ್ಯರಿಗೂ ಮಕ್ಕಾದ ಖುರೈಷಿಗಳಿಗೂ ಅನುಕೂಲವಾಯಿತು. ಹಲವು ಕಡೆಗಳಿಂದ ಶತ್ರು ಪಕ್ಷದವರು ಇಸ್ಲಾಮಿನಲ್ಲಿ ಶ್ರದ್ಧೆ ತೋರಿಸುವವರಂತೆ ನಟಿಸಿ ಅದರ ಪ್ರಚಾರಕರನ್ನು ಆಸಕ್ತಿಯಿಂದ ಕರೆಸಿ ಅವರನ್ನು ಕೊಲೆ ಮಾಡಿಸಿದರು. ಈ ಸಮಯದಲ್ಲಿ ಮುರೈಸಿಯಾದ ಪಾಳೆಯಗಾರ ಹರೀಸ್ ಎಂಬಾತ ಮುಹಮ್ಮದನ ಮೇಲೆ ಯುದ್ಧಕ್ಕೆ ಬಂದು ಸೋತುಹೋದ. ಸು. 626ರಲ್ಲಿ ಖುರೈಷಿ ಮನೆತನದವರು ಮುಹಮ್ಮದ್ ಓಡಿಸಿದ್ದ ಯಹೂದ್ಯರೊಡನೆ ಸೇರಿ ಬಲುದೊಡ್ಡ ಸೈನ್ಯಸಮೇತ ಮುಹಮ್ಮದನೊಡನೆ ಯುದ್ಧಕ್ಕೆ ಬಂದರು. ಮುಹಮ್ಮದ್ ಹೆದರದೆ ತನ್ನ ಪಟ್ಟಣದ ಸುತ್ತಲೂ ಕಂದಕ ತೋಡಿಸಿ ಯುದ್ಧಕ್ಕೆ ಸಿದ್ಧನಾದ. ಯುದ್ಧ ನಡೆಯಿತು. ಆಹಾರ ಸಾಮಗ್ರಿಯ ಕೊರತೆಯಿಂದ, ಹಲವರ ದ್ರೋಹಚಿಂತನೆಯಿಂದ ಮುಹಮ್ಮದ್ ಬಹಳ ಕಷ್ಟಪಡಬೇಕಾಯಿತು. ಹೀಗೆ ದಿನ ಕಳೆಯುತ್ತಿದ್ದಂತೆ ಮಳೆ. ಬಿರುಗಾಳಿ ಆರಂಭವಾಯಿತು. ಶತ್ರುಗಳಿಗೆ ಆಹಾರದ ಕೊರತೆ ಒದಗಿ ಸೋತು ಹೋದರು. ಮುಹಮ್ಮದ್ ವಿಜಯಿಯಾದ.

	ಕಾಬಾ ಇಸ್ಲಾಮಿನ ಕೇಂದ್ರವಾಗಿತ್ತು. ಇದನ್ನು ಇಬ್ರಾಹಿಮ್ ಮತ್ತು ಅವನ ಮಗ ಇಸ್ಮಾಯಿಲರು ಅಲ್ಲಾಹ್‍ನ ಆಜ್ಞೆ ಪ್ರಕಾರ ಇಬಾದತ್‍ಗಾಗಿ (ಪ್ರಾರ್ಥನೆ) ಕಟ್ಟಿದ್ದರು. ಹಜ್ ಯಾತ್ರೆ ಮುಸಲ್ಮಾನರಿಗೆ ಅನಿಮಾರ್ಯವಾದುದು. ಹೀಗೆ ಮವೀನಾ ನಗರಕ್ಕೆ ಬಂದು ನೆಲಸಿದ್ದ ಮುಸಲ್ಮಾನರಿಗೆ ಕಾಬಾದ ದರ್ಶನ ಮಾಡಬೇಕೆಂಬ ಅಭಿಲಾಷೆಯಾಯಿತು, ಮಹಮ್ಮದ್ ಅದಕ್ಕೆ ಒಪ್ಪಿದ. ಆರನೆಯ ಹಿಜರಿಯಲ್ಲಿ ಮುಹಮ್ಮದ್ ಕಾಬಾಕ್ಕೆ ಹೊರಟ. ಇವನ ಜೊತೆಯಲ್ಲಿ 1400 ಯಾತ್ರಿಕರು ಹೊರಟರು. ಮಕ್ಕಾದ ಜನರು ಇವರನ್ನು ತಡೆದುದರ ಪರಿಣಾಮ ಅವರೆಲ್ಲರೂ ಹುದೈಬಿಯಾ ಎಂಬಲ್ಲಿ ತಂಗಿದರು. ಶಸ್ತ್ರಾಸ್ತ್ರಗಳು, ಸಾಮಗ್ರಿಗಳು ಇಲ್ಲದೆ ತನ್ನವರೆಲ್ಲ ಯುದ್ಧದಲ್ಲಿ ಸತ್ತು ಹೋಗುತ್ತಾರೆಂದು ತಿಳಿದ ಮುಹಮ್ಮದ್ ಶತ್ರುಗಳೊಡನೆ ಕೆಲವು ಶರತ್ತುಗಳನ್ನು ಮಾಡಿಕೊಂಡ. ಇದೇ ಹುದೈಬಿಯಾದ ಸಂಧಿ. ಆ ಶರತ್ತುಗಳ ಪ್ರಕಾರ ಮುಸಲ್ಮಾನರು ಮುಂದೆಯೂ ನಡೆದುಕೊಂಡರು.

	ಮದೀನಾ ಬಿಟ್ಟಮೇಲೆ ಖೈಬರ್ ಕಣಿವೆಯಲ್ಲಿ ನೆಲಸಿದ ಬನೂ ನಜೀರ್ ಬುಡಕಟ್ಟಿನ ಜನರ ಮೇಲೂ ಯುದ್ಧಮಾಡಬೇಕಾಯಿತು. ಹಿಜರಿ ಏಳನೆಯ ಮೊಹರಮ್ ತಿಂಗಳು ನಡೆದ ಈ ಯುದ್ಧದಲ್ಲಿ ಮುಸಲ್ಮಾನರು ಗೆದ್ದು ಖೈಬರನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಖೈಬರ್‍ನ ಈ ವಿಜಯದ ಅನಂತರ ಮುಹಮ್ಮದನ ಶಕ್ತಿ ಹೆಚ್ಚಿತು.

	ಹುದೈಬಿಯಾ ಸಂಧಿಯಂತೆ 629ರಲ್ಲಿ ಮುಹಮ್ಮದ್ ತನ್ನ ಹಲವು ಅನುಯಾಯಿಗಳೊಡನೆ ಕಾಬಾದ ದರ್ಶನಕ್ಕೆ ಹೋದ. ಇವನ ಅಭ್ಯುದಯವನ್ನು ಸಹಿಸಲಾರದೆ ಹೋಗಿದ್ದ ಅಲ್ಲಿಯ ಶತ್ರುಗಳು ಇವನ ಕಡೆಯ ಕೆಲವರನ್ನು ಕೊಂದುಹಾಕಿದರು. ಇದರಿಂದಾಗಿ ಅವರನ್ನು ಸದೆಬಡಿಯಲು ಯುದ್ಧವೊಂದೇ ಉಪಾಯವೆಂದು ನಿರ್ಣಯಿಸಿ 630ರಲ್ಲಿ ಅನಿರೀಕ್ಷಿತವಾಗಿ ಸೈನ್ಯಸಮೇತ ಮಕ್ಕಾನಗರವನ್ನು ಮುತ್ತಿಗೆ ಹಾಕಿದ. ಮಕ್ಕಾನಿವಾಸಿಗಳು ಶರಣಾಗತರಾದರು, ಶತ್ರುಗಳಲ್ಲಿಯ ಕೆಲವು ಪ್ರಮುಖವ್ಯಕ್ತಿಗಳನ್ನು ಬಂಧಿಸಿದ. ಇಸ್ಲಾಮಿನ ಅತಿ ಪ್ರಾಚೀನ ಕೇಂದ್ರವಾದ ಮಕ್ಕಾ ಇವನ ವಶವಾದ್ದರಿಂದ ಬಹಳ ಜನ ಇಸ್ಲಾಮ್‍ಧರ್ಮ ಸ್ವೀಕರಿಸಿದರು. ಮುಂದೆ ಈ ಧರ್ಮದ ಕ್ಷೇತ್ರ ಇನ್ನೂ ದೊಡ್ಡದಾಯಿತು. ಮುಹಮ್ಮದ್ ಮಕ್ಕಾ ತಲಪುತ್ತಲೇ ಮೊದಲು ಕಾಬಾಕ್ಕೆ ಹೋದ. ಅಲ್ಲಿದ್ದ ವಿಗ್ರಹಗಳನ್ನು ತೆಗೆಯಿಸಿದ. ಈ ವಿಜಯದ ಅನಂತರ ಮುಹಮ್ಮದ್ ಮಾಡಿದ ಮಹತ್ತ್ವಪೂರ್ಣ ಕೆಲವು ಅಂಶಗಳು ಹದೀಸ್‍ನ ಪುಸ್ತಕಗಳಲ್ಲಿವೆ. ಮಕ್ಕಾದ ಮುತ್ತಿಗೆ ಮುಗಿಯುವ ಮುನ್ನವೇ ಮುಹಮ್ಮದ್ ಮಕ್ಕಾ ಮತ್ತು ತಾಯಫ್ ನಗರಗಳ ಮಧ್ಯೆ ಇರುವ ಹುನೈನ್ ಎಂಬ ಪರ್ವತದ ಕಣಿವೆಯಲ್ಲಿ ಹವಾಜೀನ್ ಮತ್ತು ಸಾಕೀಫ್ ಬುಡಕಟ್ಟಿಗೆ ಸೇರಿದ ಶತ್ರುಗಳ ಜೊತೆ ಯುದ್ಧ ಮಾಡಿ ಗೆದ್ದ. ಇವರು ತಾಯಫ್ ನಗರಕ್ಕೆ ಓಡಿದಾಗ ಅಲ್ಲಿಗೂ ಮುಹಮ್ಮದ್ ಸೈನ್ಯಸಮೇತ ಮುತ್ತಿಗೆ ಹಾಕಿ ಅವರನ್ನು ಸೋಲಿಸಿದ. ಸೆರೆಸಿಕ್ಕಿದವರನ್ನು ಬಿಟ್ಟು ಬಿಟ್ಟ.

	ಅರಬ್‍ದೇಶದ ಉತ್ತರದಲ್ಲಿದ್ದ ರೋಮ್ ರಾಜ್ಯದ ಮೇಲೂ ಮುಹಮ್ಮದ್ ಯುದ್ಧ ಮಾಡಿ ಅದರಲ್ಲೂ ಗೆದ್ದ. ತನ್ನ ಜೀವನದ ಕೊನೆಯ ಹತ್ತುವರ್ಷಗಲ್ಲಿ ಒಟ್ಟು 27 ಯುದ್ಧಗಳಲ್ಲಿ ಮುಹಮ್ಮದ್ ಭಾಗವಹಿಸಿದ್ದ. ಇವುಗಳಲ್ಲಿ 9 ದೊಡ್ಡ ಯುದ್ಧಗಳು; ಇತರ 18 ಯುದ್ಧಗಳು ಅವನ ಆದೇಶಗಳಿಗನುಸಾರ ಬೇರೆಬೇರೆ ಸರದಾರರ ನೇತೃತ್ವದಲ್ಲಿ ನಡೆದವು.

	ಮಕ್ಕಾ ವಶವಾದ ಎರಡು ವರ್ಷಗಳು ಮುಹಮ್ಮದನ ಜೀವನದಲ್ಲಿ, ಇಸ್ಮಮ್ ಚರಿತ್ರೆಯಲ್ಲಿ ಅಭ್ಯುದಯದ ಅತ್ಯುನ್ನತಿಯ ಕಾಲ. ಇಡೀ ಅರಬ್ ದೇಶ ಇಸ್ಲಾಮ್ ಧರ್ಮದ ಕ್ವೇತ್ರವಾಯಿತು.

	ಹೀಗೆ ಮುಹಮ್ಮದ್ ಅರಬ್ ದೇಶದಲ್ಲಿ ಪರಂಪರಾಗತವಾಗಿ ಬೆಳೆದು ಬಂದಿದ್ದ ಕೆಟ್ಟ ಸಂಪ್ರದಾಯಗಳನ್ನು ನಿರ್ಮೂಲಗೊಳಿಸಿದ. ಇದರಿಂದಾಗಿ ಕುಡಿತ, ಹೊಡೆದಾಟ, ಕೊಳ್ಳೆ, ವ್ಯಭಿಚಾರ, ಹೆಣ್ಣು ಮಕ್ಕಳನ್ನು ಕೊಲ್ಲುವುದು ಮುಂತಾದ ಕೆಟ್ಟನಡತೆಗಳು ನಿಂತವು.

	ಮುಂದೆ ಅವನು ಇಸ್ಲಾಮ್ ಮತಬೋಧಕರನ್ನು ದೇಶವಿದೇಶಗಳಿಗೆ ಕಳುಹಿಸಿದ. ಅನೇಕರು ಇವನ ಧರ್ಮ ಸ್ವೀಕರಿಸಿದರು. ಮದೀನಾ ನಗರದಿಂದ ಕೊನೆಯ ಬಾರಿಗೆ 632ರಲ್ಲಿ ಮಕ್ಕಾನಗರದ ಯಾತ್ರೆಗೆ ಮುಹಮ್ಮದ್ ಅವನ ಅಪಾರ ಅನುಯಾಯಿಗಳೊಂದಿಗೆ ಹೊರಟ. ಮಕ್ಕಾನಗರ ಸೇರಿದಾಗ ಇವನಿಗೆ ತನ್ನ ಮುಂದಿನ ಜೀವನದ ಬಗ್ಗೆ ಅನುಮಾನ ಬಂದಿರಬೇಕು. ಅಲ್ಲಿ ನೆರೆದಿದ್ದ ಮುಸಲ್ಮಾನರ ಬಹಿರಂಗ ಸಭೆಯಲ್ಲಿ ಭಾಷಣಮಾಡುತ್ತ ನಾನು ನಿಮ್ಮನ್ನು ಇನ್ನೊಂದು ಸಾರಿ ನೋಡುತ್ತೇನೋ ಇಲ್ಲವೊ ಎಂಬ ಸಂಶಯ ವ್ಯಕ್ತಪಡಿಸಿದ. ಆ ಮಾತು ಸತ್ಯವಾಯಿತು. 632 ಜೂನ್ 8 ರೆಂದು (11ನೆಯ ಹಿಜರಿ ರಬೀಉಲ್ ಅವ್ವಲ್ ತಿಂಗಳ 12ರಂದು) 63ನೆಯ ವಯಸ್ಸಿನಲ್ಲಿ ದೈವಾಧೀನನಾದ.

	ಸಂದೇಶ : ಸರ್ವಶಕ್ತನಾದ ದೇವ ಒಬ್ಬನೇ. ಅವನು ದಯಾಮಯಿ, ಪ್ರೇಮಸ್ವರೂಪಿ, ಅವನೇ ಸೃಷ್ಟಿಕರ್ತ, ಸರ್ವಾಂತರ್ಯಾಮಿ, ಅವನನ್ನು ಧ್ಯಾನಿಸಲು ಮನುಷ್ಯ ಪ್ರಾರ್ಥನೆಮಾಡಬೇಕು. ನಿರ್ಮಲಚಿತ್ತನಾಗಿ ಭಕ್ತಿಯಿಂದ ಅವನನ್ನು ದಿನಕ್ಕೈದು ಬಾರಿ ಪ್ರಾರ್ಥಿಸಬೇಕು. ಅವನಲ್ಲಿರುವ ಒಳ್ಳೆಯ ಗುಣಗಳನ್ನು ಮನುಷ್ಯರೂ ಪಡೆಯಬೇಕು. ಪ್ರತಿಯೊಬ್ಬರೂ ಅವರವರ ಮನಸ್ಸನ್ನು, ಹೃದಯವನ್ನು ಪರೀಕ್ಷಿಸಿಕೊಳ್ಳಬೇಕು. ದೇವರಲ್ಲಿ ಮನುಷ್ಯರಿಗೆ ಪ್ರೀತಿ ಇದ್ದರೆ ದೇವರು ಸೃಷ್ಟಿಸಿದ ಎಲ್ಲ ಪ್ರಾಣಿಗಳನ್ನೂ ಪ್ರೀತಿಸಬೇಕು. ಭಗವಂತನ ಸೃಷ್ಟಿಯೆಲ್ಲವೂ ಒಳ್ಳೆಯದು. ಅದು ಮಂಗಳಕಾರಕ, ಪರಮತದನ್ನು ಸಹಿಸಬೇಕು. ಅದರ ಮತ ಸ್ಥಾಪಕರನ್ನು ಗೌರವಿಸಬೇಕು. ಮತವಿಚಾರದಲ್ಲಿ ಯಾರೂ ಯಾರನ್ನೂ ಬಲಾತ್ಕರಿಸಬಾರದು. ಜೊತೆಯವರಲ್ಲಿ ಪ್ರೀತಿ, ವಿನಯಗಳಿಂದ ವರ್ತಿಸಬೇಕು. ಅವರಿಗೆ ಸಂತೋಷವಾಗುವಂತೆ ನಡೆದುಕೊಳ್ಳಬೇಕು. ಎಲ್ಲರೂ ಸಮಾನರು ಮತ್ತು ಸಹೋದರರು. ಹೆಣ್ಣು ಮತ್ತು ಗಂಡುಗಳು ಸರಿಸಮ. ತಂದೆ ತಾಯಿಗಳನ್ನು ಭಕ್ತಿ ಪ್ರೀತಿಗಳಿಂದ ಕಾಣಬೇಕು. ತಾಯಿಯ ಪಾದಾರವಿಂದಗಳಲ್ಲಿ ಪುಣ್ಯಲೋಕ ಮನೆಮಾಡಿದೆ. ಅತಿಥಿಗಳನ್ನು ಸತ್ಕರಿಸಬೇಕು, ಸುಳ್ಳು, ಮೋಸ, ಮದ್ಯಪಾನ, ಜೂಜು ಇವನ್ನು ತ್ಯಜಿಸಬೇಕು. ಇವು ಮನುಷ್ಯನ ವಿನಾಶದ ದಾರಿಗಳು. ವಿದ್ಯಾವಂತರು ದೇವರ ಪ್ರತಿನಿಧಿಗಳಿದ್ದ ಹಾಗೆ. ವಿದ್ಯೆಗೆ ಸಹಾಯ ಮಾಡಿ ವಿದ್ಯಾವಂತ ದೇವರ ಪ್ರತಿನಿಧಿಗಳಿದ್ದ ಹಾಗೆ. ವಿದ್ಯೆಗೆ ಸಹಾಯ ಮಾಡಿ ವಿದ್ಯಾವಂತರನ್ನು ಪ್ರೋತ್ಸಾಹಿಸಿದವನಿಗೆ ಪುಣ್ಯ ಸಿಗುತ್ತದೆ-ಹೀಗೆ ಕುರಾನಿನ ಮೂಲಕ ಮುಹಮ್ಮದ್ ಪೈಗಂಬರ್ ಸಂದೇಶ ಬೀರಿದ.
(ಕೆ.ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ